ರಾಮ ಮಂದಿರದ ಭೂಮಿ ಪೂಜೆಗೆ ಸಮಯ ನಿಗದಿಪಡಿಸಿದ ಅರ್ಚಕರಿಗೆ ಬೆದರಿಕೆ ಕರೆ – ಪೋಲೀಸರಿಂದ ಭದ್ರತೆ

0
266
Tap to know MORE!

ಬೆಳಗಾವಿ : ಅಯೋಧ್ಯೆಯ ರಾಮ ಮಂದಿರದ ಶಿಲಾನ್ಯಾಸ ಸಮಾರಂಭದಲ್ಲಿ ‘ಭೂಮಿ ಪೂಜೆ’ ಕಾರ್ಯಕ್ರಮ ನಡೆಸಲು ಶುಭ ಸಮಯವನ್ನು ನಿಗದಿಪಡಿಸಿದ 75 ವರ್ಷದ ಅರ್ಚಕ ವಿಜಯೇಂದ್ರ ಅವರಿಗೆ ಕೊಲೆ ಬೆದರಿಕೆಯ ಕರೆಗಳು ಬರುತ್ತಿರುವ ಹಿನ್ನಲೆಯಲ್ಲಿ, ಕರ್ನಾಟಕದ ಬೆಳಗಾವಿಯಲ್ಲಿರುವ ಅವರ ನಿವಾಸದಲ್ಲಿ ಭದ್ರತೆ ಒದಗಿಸಲಾಗಿದೆ.

ಬೆಳಗಾವಿಯ ಶಾಸ್ತ್ರಿ ನಗರ ಪ್ರದೇಶದಲ್ಲಿ ವಾಸಿಸುವ ಅರ್ಚಕರಿಗೆ, ಭದ್ರತೆ ಒದಗಿಸಲು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

“ರಾಮ ಮಂದಿರ ನಿರ್ಮಾಣ ಮಾಡಲು ವಿರೋಧಿಸುವವರು, ಭೂಮಿ ಪೂಜೆಗೆ ಮುಹೂರ್ತವನ್ನು ನಿಗದಿಪಡಿಸಿದ ಅರ್ಚಕರನ್ನೂ ಬಿಡುತ್ತಿಲ್ಲ ಎಂಬುದು ಗಂಭೀರ ವಿಷಯವಾಗಿದೆ” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ.

ಅರ್ಚಕ ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಭೂಮಿ ಪೂಜೆಗೆ ದಿನಾಂಕವನ್ನು ಏಕೆ ನಿಗದಿಪಡಿಸಿದ್ದೀರಿ ಎಂದು ಕರೆ ಮಾಡಿದವರು ಕೇಳಿದ್ದಾರೆ. ಮತ್ತೊಬ್ಬರು, ‘ನೀವು ಯಾಕೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಿ?’ ಎಂದು ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ. ಭೂಮಿ ಪೂಜೆಗೆ ದಿನಾಂಕ ನೀಡುವಂತೆ ಸಂಘಟಕರು ನನ್ನನ್ನು ಕೋರಿದ್ದಾರೆ ಮತ್ತು ನಾನು ಕೇಳಿದಂತೆ ಮಾಡಿದ್ದೇನೆ ಅಷ್ಟೆ. ಕರೆ ಮಾಡಿದವರು, ಅವರ ಹೆಸರನ್ನು ಬಹಿರಂಗಪಡಿಸಲಿಲ್ಲ. ಕರೆಗಳು ಬೇರೆ ಬೇರೆ ಸಂಖ್ಯೆಗಳಿಂದ ಬರುತ್ತಿವೆ” ಎಂದಿದ್ದಾರೆ.

ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅವರು ‘ಭೂಮಿ ಪೂಜೆ’ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ‘ಭೂಮಿ ಪೂಜೆ’ ಸಮಾರಂಭವು ನಾಳೆ ಮಧ್ಯಾಹ್ನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here