ರೋಹಿತ್ ಶರ್ಮಾ ಸೇರಿದಂತೆ ನಾಲ್ವರು ಕ್ರೀಡಾಪಟುಗಳಿಗೆ “ರಾಜೀವ್ ಗಾಂಧಿ ಖೇಲ್ ರತ್ನ” ಪುರಸ್ಕಾರ

0
206
Tap to know MORE!

ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಶಿಫಾರಸು ಮಾಡಲ್ಪಟ್ಟ ನಾಲ್ಕು ಕ್ರೀಡಾಪಟುಗಳಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಕುಸ್ತಿಪಟು ವಿನೇಶ್ ಫೋಗಟ್ ಸೇರಿದ್ದಾರೆ. ಇವರಲ್ಲದೆ, ಟೇಬಲ್ ಟೆನಿಸ್ ಆಟಗಾರ್ತಿ ಮಾನಿಕಾ ಬಾತ್ರಾ ಮತ್ತು ಪ್ಯಾರಾಲಿಂಪಿಯನ್ ಎಂ.ತಂಗವೇಲು ಇತರ ಎರಡು ಹೆಸರುಗಳಾಗಿವೆ.

ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಬಳಿಕ ಈ ಪುರಸ್ಕಾರಕ್ಕೆ ಪಾತ್ರರಾಗುತ್ತಿರುವ ನಾಲ್ಕನೇ ಕ್ರಿಕೆಟಿಗ ರೋಹಿತ್ ಶರ್ಮಾ. ಸಚಿನ್‌ 1998 ರಲ್ಲಿ ಖೇಲ್ ರತ್ನ, ಧೋನಿಗೆ 2007 ರಲ್ಲಿ ಮತ್ತು ಕೊಹ್ಲಿಗೆ 2018 ರಲ್ಲಿ ಪ್ರಶಸ್ತಿ ನೀಡಲಾಗಿತ್ತು.

ರೋಹಿತ್ 2019 ರಲ್ಲಿ ತೋರಿದ ಅದ್ಭುತ ಪ್ರದರ್ಶನದ ನಂತರ ಈ ಪುರಸ್ಕಾರಕ್ಕೆ ನಾಮನಿರ್ದೇಶನವನ್ನು ಗಳಿಸಿದ್ದರು. ವಿಶೇಷವಾಗಿ ಏಕದಿನ ಪಂದ್ಯಗಳಲ್ಲಿ ಅವರು ತಮ್ಮ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. 2019ರಲ್ಲಿ ಅವರು ಏಕದಿನ ಕ್ರಿಕೆಟ್‌ನ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಕಳೆದ ವರ್ಷ, ಏಳು ಶತಕಗಳನ್ನು ಒಳಗೊಂಡಂತೆ 1,490 ರನ್ ಗಳಿಸಿದರು – ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ಆಟಗಾರರಿಂದ ಹೆಚ್ಚು.

ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಮತ್ತು ಇತರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನಿರ್ಧರಿಸಲು ಮಂಗಳವಾರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ಸೇರಿದ ನಂತರ ಈ ಹೆಸರುಗಳನ್ನು ನಿರ್ಧರಿಸಲಾಯಿತು. 4 ಕ್ರೀಡಾಪಟುಗಳ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡುವುದು ಇದು ಎರಡನೇ ಬಾರಿ. 2016 ರಲ್ಲಿ ಶಟ್ಲರ್ ಪಿ ವಿ ಸಿಂಧು, ಜಿಮ್ನಾಸ್ಟ್ ದೀಪಾ ಕರ್ಮಕರ್, ಶೂಟರ್ ಜಿತು ರೈ, ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಈ ಪ್ರಶಸ್ತಿಯನ್ನು ಪಡೆದಿದ್ದರು.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಧ್ಯಾನ್ ಚಂದ್ ಪ್ರಶಸ್ತಿ ಸೇರಿವೆ. ಇದನ್ನು ಪ್ರತಿ ವರ್ಷ ಆಗಸ್ಟ್ 29 ರಂದು ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಗಳು ನೀಡುತ್ತಾರೆ. ರಾಷ್ಟ್ರೀಯ ಕ್ರೀಡಾ ದಿನವನ್ನು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯ ನೆನಪಿನಲ್ಲಿ, ಆಗಸ್ಟ್ 29ರಂದು ಆಚರಿಸಲಾಗುತ್ತದೆ.

LEAVE A REPLY

Please enter your comment!
Please enter your name here