#SpeakUpForStudents ಸಾಮಾಜಿಕ ಮಾಧ್ಯಮದ ಅಭಿಯಾನಕ್ಕೆ ರಾಹುಲ್ ಗಾಂಧಿ ಬೆಂಬಲ

0
147

ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಿ, ಹಿಂದಿನ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಮೌಲ್ಯಮಾಪನವನ್ನು ಮಾಡುವಂತೆ ಕೋರಲು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐ ಜುಲೈ 10 ಶುಕ್ರವಾರದಂದು #SpeakUpForStudents ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದೆ. ಅದಲ್ಲದೆ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಅನುಭವಿಸಿದ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, “ಇತರ ಬೇಡಿಕೆಯಾಗಿರುವ #NoFeesFor6Months” ಸರ್ಕಾರದ ಮುಂದಿಡಲಿದ್ದೇವೆ ಎಂದು ವಿದ್ಯಾರ್ಥಿ ಸಂಘ ತಿಳಿಸಿದೆ.

ಇದನ್ನು ಬೆಂಬಲಿಸಿ ರಾಷ್ಟ್ರೀಯ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ, ವಾಯ್ನಾಡ್ ಸಂಸದ ರಾಹುಲ್ ಗಾಂಧಿ ಅಭಿಯಾನಕ್ಕೆ ಸೇರಿದ್ದಾರೆ.

“ಐಐಟಿಗಳು ಸೇರಿದಂತೆ ಹಲವಾರು ಕಾಲೇಜುಗಳು ಈಗಾಗಲೇ ಪರೀಕ್ಷೆ ರದ್ದುಗೊಳಿಸಿ, ಹಿಂದಿನ ಫಲಿತಾಂಶದ ಆಧಾರದ ಮೇಲೆ ಈ ಸೆಮಿಸ್ಟರ್ ಅಂಕಗಳನ್ನು ನೀಡುವುದಾಗಿ ಘೋಷಿಸಿದೆ. ಆದರೆ ಯುಜಿಸಿ ಗೊಂದಲ ಸೃಷ್ಟಿಸಿದೆ. ತನ್ನ ನಿರ್ಧಾರವನ್ನು ಯುಜಿಸಿ ಬದಲಿಸಬೇಕು”ಎಂದು ರಾಹುಲ್ ಗಾಂಧಿ ಹೇಳಿದರು.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಅಥವಾ ಯುಜಿಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಅದು ಅಂತಿಮ ವರ್ಷದ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ನಡೆಸಲು ಆದೇಶಿಸಿತು. ಈ ಘೋಷಣೆಯ ನಂತರ ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

“ಕಳೆದ ಎರಡು ತಿಂಗಳುಗಳಿಂದ ಎನ್‌ಎಸ್‌ಯುಐ ಪರೀಕ್ಷೆಗಳನ್ನು ರದ್ದುಗೊಳಿಸಲು ರಾಷ್ಟ್ರೀಯ ಅಭಿಯಾನವನ್ನು ನಡೆಸುತ್ತಿದೆ. ಎನ್‌ಎಸ್‌ಯುಐ 100 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳೊಂದಿಗೆ ಸಭೆ ನಡೆಸಿದೆ. ದೇಶಾದ್ಯಂತದ ಸುಮಾರು 150 ವಿಶ್ವವಿದ್ಯಾಲಯಗಳ ವಿಸಿಗಳಿಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸಲಾಗಿದೆ. ಜಿಲ್ಲಾವಾರು ಪ್ರತಿಭಟನೆಗಳು ಮತ್ತು ಪತ್ರಿಕಾಗೋಷ್ಠಿಗಳನ್ನು ಮಾಡಿದೆ ಮತ್ತು ಅನೇಕ ರಾಜ್ಯಗಳಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದೆ ”ಎಂದು ವಿದ್ಯಾರ್ಥಿ ಸಂಘಟನೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“69 ವಿಶ್ವವಿದ್ಯಾಲಯಗಳು (ನಮಗೆ ತಿಳಿದಂತೆ) ವಿದ್ಯಾರ್ಥಿಗಳನ್ನು ಹಿಂದಿನ ಫಲಿತಾಂಶದ ಆಧಾರದ ಮೇಲೆ ತೇರ್ಗಡೆಗೊಳಿಸಲು ಒಪ್ಪಿಕೊಂಡಿವೆ; ಮಹಾರಾಷ್ಟ್ರ, ಒಡಿಶಾ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಇದನ್ನು ಅನುಸರಿಸಿವೆ ”ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

LEAVE A REPLY

Please enter your comment!
Please enter your name here